SWARUPASANDARSHAN NEWS
‘ಪ್ರೇಮದ ಊರಲಿ’ ಬ್ಲಾಕ್ಬಸ್ಟರ್ ಓಟಕ್ಕೆ 'ರಾಕಿಂಗ್ ಸ್ಟಾರ್' ಫಿದಾ: ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿದ ಯಶ್!
🕒
‘ಪ್ರೇಮದ ಊರಲಿ’ ಬ್ಲಾಕ್ಬಸ್ಟರ್ ಓಟಕ್ಕೆ 'ರಾಕಿಂಗ್ ಸ್ಟಾರ್' ಫಿದಾ: ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿದ ಯಶ್!
ಬೆಂಗಳೂರು : ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಸಂಚಲನ ಮೂಡಿಸಿರುವ ‘ಪ್ರೇಮದ ಊರಲಿ’ ಚಿತ್ರದ ಅಭೂತಪೂರ್ವ ಯಶಸ್ಸಿಗೆ ರಾಕಿಂಗ್ ಸ್ಟಾರ್ ಯಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ನಲ್ಲಿ ನಿರೀಕ್ಷೆಗೂ ಮೀರಿದ ದಾಖಲೆ ಬರೆಯುತ್ತಿರುವ ಚಿತ್ರತಂಡವನ್ನು ಖುದ್ದಾಗಿ ಭೇಟಿಗೆ ಆಹ್ವಾನಿಸಿದ ಯಶ್, ಚಿತ್ರದ ಗೆಲುವಿಗೆ ಬೆನ್ನುತಟ್ಟಿ, ಮುಂದಿನ ಪಯಣಕ್ಕೆ ಹೃತ್ಪೂರ್ವಕ ಶುಭ ಹಾರೈಸಿದ್ದಾರೆ.
ಭಾರತೀಯ ಚಿತ್ರರಂಗದ ಅಗ್ರಗಣ್ಯ ನಟನಿಂದ ಸಿಕ್ಕ ಈ ಅಭಿನಂದನೆ ಚಿತ್ರತಂಡಕ್ಕೆ ಹೊಸ ಹುರುಪು ಹಾಗೂ ಸ್ಫೂರ್ತಿ ತುಂಬಿದೆ. ಮನೋಜ್ ಕುಮಾರ್ ನಿರ್ದೇಶನದ ಹಾಗೂ ‘ವೆನಿಲ್ಲಾ ಎಂಟರ್ಟೈನ್ಮೆಂಟ್’ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ರಂಗಾಯಣ ರಘು, ಶ್ರೀರಾಮ್, ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಭಾವನಾತ್ಮಕ ಕಥಾಹಂದರ ಹಾಗೂ ಕಲಾವಿದರ ಅದ್ಭುತ ಅಭಿನಯದಿಂದ ಕನ್ನಡಿಗರ ಹೃದಯ ಗೆದ್ದಿರುವ ಈ ಚಿತ್ರ, ಕೇವಲ ಬಾಯಿಮಾತಿನ ಪ್ರಚಾರದ ಬಲದಿಂದಲೇ ಚಿತ್ರಮಂದಿರಗಳತ್ತ ಜನಸಾಗರ ಹರಿದುಬರುವಂತೆ ಮಾಡಿದೆ.
ಚಿತ್ರತಂಡದ ಶ್ರಮವನ್ನು ಗುರುತಿಸಿ ಬೆಂಬಲಿಸುವ ಯಶ್ ಅವರ ಈ ಪ್ರೋತ್ಸಾಹದ ನಡೆಗೆ ಚಿತ್ರತಂಡ ತುಂಬು ಹೃದಯದ ಕೃತಜ್ಞತೆ ಸಲ್ಲಿಸಿದೆ.
ವಿಶೇಷವೆಂದರೆ, ‘ಜೈಲರ್ 2’ ಮತ್ತು ‘ರಣಬಾಲಿ’ಯಂತಹ ಭಾರೀ ಬಜೆಟ್ನ ಬಿಗ್ ರಿಲೀಸ್ಗಳು ಎದುರಾಗಿದ್ದರೂ ‘ಪ್ರೇಮದ ಊರಲಿ’ ಸಿನಿಮಾದ ಅಬ್ಬರ ಕಿಂಚಿತ್ತೂ ತಗ್ಗಿಲ್ಲ. ಘಟಾನುಘಟಿ ಪರಭಾಷಾ ಮತ್ತು ಸ್ವಭಾಷಾ ಚಿತ್ರಗಳ ಪೈಪೋಟಿಯ ನಡುವೆಯೂ ರಾಜ್ಯಾದ್ಯಂತ ಹೌಸ್ಫುಲ್ ಪ್ರದರ್ಶನಗಳನ್ನು ಕಾಣುತ್ತಾ ತನ್ನ ಗಟ್ಟಿ ನೆಲೆಯನ್ನು ಉಳಿಸಿಕೊಂಡಿದೆ.
ಪ್ರೇಕ್ಷಕರ ಪ್ರೀತಿ ಹಾಗೂ ಗಟ್ಟಿ ಕಂಟೆಂಟ್ ಬಲದಿಂದ ಮುನ್ನುಗ್ಗುತ್ತಿರುವ ಈ ಚಿತ್ರ, ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದ್ದು, ಅತಿ ಶೀಘ್ರದಲ್ಲೇ ₹100 ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಹಾಕಿದೆ.