ವಿಶ್ವ ರಂಗಭೂಮಿ ದಿನಾಚರಣೆ-2026 ಪ್ರಯುಕ್ತ ಖ್ಯಾತ ನಟ ಸಿಹಿಕಹಿ ಚಂದ್ರು ಅವರಿಗೆ 'ಸೂರ್ಯ ಪ್ರಶಸ್ತಿಯನ್ನು 'ಸೂರ್ಯ ಕಲಾವಿದರು' ಸಂಸ್ಥೆಯಿಂದ 30/3/2026 ರಂದು ಸೋಮವಾರ ಸಂಜೆ ನಾಗರಬಾವಿಯ ಕಲಾಗ್ರಾಮದಲ್ಲಿ ಪ್ರದಾನ ಮಾಡಿ ಗೌರವಿಸಲಾಯಿತು.
ಹಿರಿಯ ಕಲಾವಿದರಾದ ಶ್ರೀ ಸಿಹಿಕಹಿ ಚಂದ್ರು ಅವರು ಈ ಸಂಧರ್ಭದಲ್ಲಿ ತಾವು ರಂಗಭೂಮಿಗೆ ಬಂದಾಗ ಮೊಟ್ಟ ಮೊದಲಿಗೆ ಗುರುತಿಸಿದ್ದು ಇದೆ ಸೂರ್ಯ ಕಲಾವಿದರು ಸಂಸ್ಥೆಯ ಸಂಜಯ್ ಸೂರಿ ಅವರು ಎಂದು ಹೇಳುತ್ತಾ ಹಳೆಯ ನೆನಪುಗಳನ್ನು ಹಂಚಿಕೊಂಡರು. ಅಲ್ಲದೇ ರಾಜ್ಯೋತ್ಸವದ ಪ್ರಶಸ್ತಿಗಿಂತ ಸೂರ್ಯ ಕಲಾವಿದರು ಪ್ರಶಸ್ತಿ ನನಗೆ ಲಭಿಸಿರುವುದು ಅತ್ಯಂತ ಖುಷಿಯಾಗಿದೆ ಎಂದರು.
ಸೂರ್ಯ ಕಲಾವಿದರು ಹಲವಾರು ದಶಕಗಳಿಂದ,ದೇಶ ವಿದೇಶಗಳಲ್ಲಿ ನೃತ್ಯ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದಿರುತ್ತಾರೆ. ಇದೇ ಮೊದಲಬಾರಿಗೆ, ತಮ್ಮ ಸೂರ್ಯ ಕಲೋತ್ಸವ - 2026 ಕಾರ್ಯಕ್ರಮದ ಅಡಿಯಲ್ಲಿ ಕಿರು ನಾಟಕ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಮಾರ್ಚ್ 6 ರಂದು ಈ ಸ್ಪರ್ಧೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದಿತ್ತು. ಈ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪುರಸ್ಕಾರಗಳ ವಿತರಣೆ ಸಮಾರಂಭ ಮಾರ್ಚ್ 20, ಕಲಾಗ್ರಾಮದ ಸಮುಚ್ಚಯ ಭವನದಲ್ಲಿ ಶುಕ್ರವಾರ ಜರುಗಿತು.
'ಸೂರ್ಯ ಕಲಾವಿದರು' ಸಂಸ್ಥೆಯ ಸಂಜಯ ಸೂರಿ, ವಿಕ್ರಮ್ ಸೂರಿ, ನಮಿತಾರಾವ್, ಜೊತೆಗೆ ಬಿ. ಆರ್ ಲಕ್ಷ್ಮಣ ರಾವ್ ಖ್ಯಾತ ಕವಿಗಳು , ಚಿತ್ರ ನಿರ್ಮಾಪಕರಾದ ಮೇಕಪ್ ಕುಮಾರ್, ನಿರ್ಮಾಪಕ ಮಾಧವಾನಂದ, ನಟ ರಘು ಭಟ್ ಉಪಸ್ಥಿತರಿದ್ದರು.
Comments
Post a Comment